Sunday, August 24, 2014

ಅಪ್ಪ



ಅಪ್ಪ ಕೆಲವರಿಗೆ ಬಾಲ್ಯದಲ್ಲೊ, ತಮ್ಮ ಯೌವನದಲ್ಲೊ ಮತ್ತು ಕೆಲವರಿಗೆ ಮಧ್ಯವಯಸ್ಸಿನಲ್ಲೊ ಅಥವ ಯಾವುದೋ ಒಂದು ವಯಸ್ಸಿನಲ್ಲಿ ನಮ್ಮ ಜೀವದ ಗೆಳೆಯನಾಗುತ್ತಾನೆ. ನಮಗೆ ಅರಿವಿಲ್ಲದಂತೆ ನಮ್ಮ ಬಹಳ ನೆಚ್ಚಿನ ನಂಬಲರ್ಹ ಗೆಳೆಯನಾಗಿ ನಮ್ಮಲ್ಲಿ ರೂಪುಗೊಂಡಿರುತ್ತಾನೆ.
ಬಾಲ್ಯದಲ್ಲಿ ಅಮ್ಮನ ಮುದ್ದು, ಲಾಲನೆಯಿಂದ ಕೆಲವರಿಗೆ ಅಪ್ಪ ತಂದೆಯಾಗಿ ಮಾತ್ರ ಗೊತ್ತು, ನಾವು ಸೈನಿಕ ಶಾಲೆಯಲ್ಲಿ ಇದ್ದಂತೆ ಹಾಗು ನಮ್ಮ ಅಪ್ಪ ಅಲ್ಲಿನ ಒಬ್ಬ ಶಿಸ್ತಿನ ಸೇನಾಧಿಪತಿಯಿದ್ದಂತೆ ಹಲವರಿಗೆ ತಮ್ಮ ಅಪ್ಪನ ಬಗ್ಗೆ ಬಾಲ್ಯದ ಚಿತ್ರ. ಆಗೆಲ್ಲ ನಮ್ಮ ಬೇಕು ಬೇಡಗಳನ್ನ ಅಮ್ಮನ ಹತ್ತಿರ ಹೇಳಿಕೊಳ್ಳುವ ಸಲುಗೆ ಅಪ್ಪನ ಹತ್ತಿರ ಆಗೊಲ್ಲ.
ಆದರೆ ನಾವು ಪಕ್ವವಾದಂತೆ ಅಪ್ಪ ಹತ್ತಿರ ಆಗುತ್ತಾನೆ, ನಮಗೆ ನಿಲುಕದಾ ವ್ಯಕ್ತಿಯಿಂದ ಅಪ್ಪ ನಮಗೆ ಅರಿಯದಾ ಶಕ್ತಿಯಾಗುತ್ತಾನೆ.ಅಮ್ಮ ನಮಗೆ ಮೊದಲಿನಿಂದ ಒಂದೇ ತೆರನಾದ ಹಾಗು ಒಂಚೂರು ಬದಲಾವಣೆಯಾಗದ ವ್ಯಕ್ತಿ ಆದರೆ ಅಪ್ಪ ಬದಲಾಗುತ್ತಾ ನಮ್ಮ ಸಮೀಪವಾಗುತ್ತಾನೆ.
ನಾವು ಬಿದ್ದಾಗ, ಸೋತಾಗ ಧೈರ್ಯ ತುಂಬುತ್ತಾ ನಮ್ಮ ಜೀವನದ ಮುಖ್ಯ ಘಟ್ಟದ ಪ್ರತಿಹೆಜ್ಜೆ ಇಟ್ಟಾಗಲೂ ಅಪ್ಪ ನಮ್ಮ ನೆರಳಾಗಿ ನಿಲ್ಲುತ್ತಾನೆ. ಮುಂದೆ ನಮ್ಮ ಬೇಕು ಬೇಡಗಳಿಗೆ ಕಿವಿಯಾಗುತ್ತಾನೆ, ನಮ್ಮ ದುಖ ದುಮ್ಮಾನಗಳಿಗೆ ಸಾಂತ್ವ ನವಾಗುತ್ತಾನೆ ಹಾಗು ನಮ್ಮ ಸಂತೋಷಗಳಿಗೆ ನಮಗಿಂತ ಸಂತೋಷ ಪಡುವ ಸಡಗರವಾಗುತ್ತಾನೆ.
ಇಷ್ಟೆಲ್ಲಾ ಬದಲಾವಣೆ ಹೊಂದುವ ಅಪ್ಪ ಒಂದು ವಿಷಯದಲ್ಲಿ ಮಾತ್ರ ಬದಲಾವಣೆ ಹೊಂದುವುದಿಲ್ಲ ಅದೇನಂದರೆ ತನ್ನ ನೋವುಗಳನ್ನು ಹಂಚಿಕೊಳ್ಳುವುದರಲ್ಲಿ, ತನ್ನ ನೋವು ಮಕ್ಕಳ ಧೈರ್ಯವನ್ನು ಎಲ್ಲಿ ಕುಗ್ಗಿಸುವುದೋ ಎಂಬ ಭಯ ಹಾಗು ಅದಕ್ಕೂ ಮಿಗಿಲಾಗಿ ಮಕ್ಕಳ ಮನಸ್ಸಿನಲ್ಲಿ ಅಪ್ಪ ಯಾವಾಗಲೂ ಒಬ್ಬ ಸಾಹಸಿ ಎಂಬ ಅವನ ಧೃಡವಾದ ನಿಲುವು.
ಹೌದು ಅಪ್ಪ ಎಂದೆಂದಿಗೂ ಮಕ್ಕಳ ಭಾವನೆಯಲ್ಲಿ ಕಾಯ್ವ ಹಿಮಾಲಯವಿದ್ದಂತೆ ಹಾಗೂ ನಮ್ಮ ಕಲ್ಪನೆಗೂ ನಿಲುಕದ  ಧೃವತಾರೆಯಿದ್ದಂತೆ.
© ಮಹೇಶ್ ಕಶ್ಯಪ್

Friday, August 22, 2014

ಕರ್ಮ



'ಕರ್ಮ' ಕಾದಂಬರಿಕಾರರಾದ ಕರಣಂ ಪವನ ಕುಮಾರ್ ರಿಗೆ ತಮ್ಮ ಪುಸ್ತಕದ ಬಗ್ಗೆ ನನ್ನ ಮೆಚ್ಚುಗೆ ನುಡಿ .

ಈ ಪುಸ್ತಕ ಬಿಡುಗಡೆಯಾದಾಗಿನಿಂದ ಏನೋ ಕುತೂಹಲವಿತ್ತು ಆದರೆ  ತಿಂಗಳ ಹಿಂದೆ ಕೊಂಡೆ.
 ಈಗಿನ ಪೀಳಿಗೆಯ ಹಾಗು ಹಿಂದಿನವರ ನಡುವಿನ ಶೀತಲ ಸಮರ ಧರ್ಮದ, ನಿತ್ಯಕರ್ಮದ ಆಚರಣೆ ಬಗ್ಗೆ ಇರುವ ಗೊಂದಲ, ತಾತ್ಸಾರಗಳ ಬಗ್ಗೆ ನಿಮ್ಮ ನಿರೂಪಣೆ ಚೆನ್ನಾಗಿದೆ. ಈಗಿನ ನಮ್ಮವರ ಜೀವನಶೈಲಿಯ ಬಗ್ಗೆ,  ಹಿರಿಯರ ಬಗ್ಗೆ ಗೌಣವಾಗಿರುವ ಗೌರವ, ತನಗೋಸ್ಕರ ಬದುಕುವ ಚಟ, ತನ್ನ ಚಟ ಚಟುವಟಿಕೆಯಿಂದ ತನ್ನ ಕುಟುಂಬಕ್ಕೆ ಹಾಗು ತನ್ನ ಸಂಬಂಧಿಕರಿಗೆ ಆಗುವ ನಷ್ಟವೇನು ಎನ್ನುವ ಉಡಾಫೆ.ನೀವು ಈ ಕಾದಂಬರಿಯಲ್ಲಿ ಬರೆದಿರುವ ಲಿವ್ಇನ್ ಸಂಬಂಧ ಹಾಗು ವೈಫ್ ಸ್ವಾಪಿಂಗ್ ಬಗ್ಗೆ ನಾವು ಕೇಳಿದ್ದೇವೆ ಆದರೆ ನಾವು ಬೆಳೆದು ಬಂದ ಸಂಸ್ಕೃತಿ ಹಾಗು ಬೆಳೆಸಿಕೊಳ್ಳುತ್ತಿರುವ ಸಂಸ್ಕೃತಿ ಬಗ್ಗೆ ಹೇಸಿಗೆ ಆಗುತ್ತದೆ. 
ನಿಮ್ಮ ನಂಬಿಕೆ ಹಾಗು ಶ್ರದ್ದೆ ಬಗ್ಗೆ ಬರುವ ವಿಚಾರಗಳು ಚಿಂತನೆಗೆ ಹಚ್ಚುತ್ತವೆ, ಹೌದು ನಮ್ಮ ಪೀಳಿಗೆಯವರಿಗೆ ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳ ಬಗ್ಗೆ ಗೊಂದಲ,ಕೀಳರಿಮೆ,ಉಡಾಫೆ ಮನೋಭಾವ  ಬೆಳೆಯಲು ಕಾರಣಗಳು ನೂರಾರಿವೆ. ಹಿಂದಿನ ಕಾಲದಲ್ಲಿ ವಿದ್ಯೆಯಲ್ಲಿ ಲೌಕಿಕ  ಹಾಗೂ ಸಂಸ್ಕೃತಿಯ ಜ್ಞಾನವನ್ನು ವಿಂಗಡಣೆ ಮಾಡದೆ ಅಭ್ಯಯಿಸುತ್ತಿದ್ದರು ಆದರೆ ಈ ಕಾಲದಲ್ಲಿ ಪೋಷಕರು ಕೆಲಸಗಳಿಸುವ, ಹೆಚ್ಚು ಸಂಪಾದನೆ ಮಾಡುವ ವಿಷಯಗಳ ಬಗ್ಗೆ ಮಕ್ಕಳನ್ನು ಚಿಕ್ಕವಯಸ್ಸಿನಿಂದ ಅಭ್ಯಯಿಸಲು ಪ್ರಚೋದಿಸುತ್ತಾರೆ. ನಮ್ಮ ಆಚಾರ ವಿಚಾರಗಳ ಬಗ್ಗೆ ಗೌರವ ಇಲ್ಲದ್ದರಿಂದ ಸೂರಿಯ ಹಾಗೆ ಸಂಸ್ಕೃತಿ ಹೀನರಾಗಿದ್ದೇವೆ. 
ಇನ್ನು ನಿಮ್ಮ ಇನ್ನೊಬ್ಬ ಪಾತ್ರಧಾರಿ ನೇಹಾ ಅನಾಚರ ಸಂಸ್ಕೃತಿಗೆ ಕಳಶವಿದ್ದಂತೆ, ಹೆತ್ತ ತಂದೆ ತಾಯಿಗಳು ಮಕ್ಕಳ ಪಾಲನೆ ಪೋಷಣೆ ಹಾಗು ಪ್ರೀತಿ ಕೊಡದಿದ್ದರೆ ಮಕ್ಕಳಿಗೆ ಸಮಾಜದಲ್ಲಿ ಯಾರ ಬಗ್ಗೆಯು ಗೌರವ ಬರುವುದಿಲ್ಲಯೆಂದು ನೇಹಳನ್ನು ಚಿತ್ರಿಸಿದ್ದೀರ. 
ಯಾವುದೆ ವಿಚಾರದ ಬಗ್ಗೆ ಒಂದು ಕಾದಂಬರಿ ಬರೆಯಬೇಕು ಅಂದರೆ ಪೂರ್ವ ತಯಾರಿಯ ಬಗ್ಗೆ ( ನಾನು ಭೈರಪ್ಪ, ಚಿದಾನಂದ ಮೂರ್ತಿ, ರವಿ ಬೆಳೆಗೆರೆ, ಪ್ರತಾಪ ಸಿಂಹ  ಹಾಗು ಡ್ಯಾನ್ ಬ್ರೌನ್ ಅಭಿಮಾನಿಯಾಗಿ) ಹೇಳಬೇಕಾಗಿಲ್ಲ ಹಾಗು ನಿಮ್ಮ ಕಾದಂಬರಿಯಲ್ಲಿ ಇದು ತುಂಬಾ ತೂಕ ಕೊಟ್ಟಿದೆ. 
ನಾನು ನಿಮ್ಮ ಪುಸ್ತಕ ಓದಿದ ತಕ್ಷಣ ನನ್ನಿಂದ ಬಂದ ವಿಮರ್ಶೆಯಿಂದ ಅಮ್ಮ ಮರುಕ್ಷಣದಿಂದಲೇ ಓದಲು ಪ್ರಾರಂಭ ಮಾಡಿದ್ದಾರೆ ಹಾಗು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ಮ ಮುಂದಿನ ಎಲ್ಲ ಸಾಹಿತ್ಯ ಕೃಷಿ ಹಾಗು ನಾಟಕಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.

© ಮಹೇಶ್ ಕಶ್ಯಪ್

ಯಾನ



ಭೂಮಿಯ ಸಂಭಂದಗಳನ್ನು ಕಳಚಿಕೊಂಡು ಭೂಮಿಯಿಂದ ಕೋಟಿ ಮೈಲುದೂರ ಪ್ರಯಾಣ ಮಾಡಬೇಕೆ, ಈ ಪ್ರ'ಯಾನ'ಕ್ಕೆ ತಗಲುವ ವೆಚ್ಚ ಕೇವಲ ರೂ190!
 ತಮ್ಮ 83 ನೇ ವಯಸ್ಸಿನಲ್ಲೂ ಈ ತರಹದ ಕಲ್ಪನೆ,  ವಿವರಣೆ, ನಿರೂಪಣೆ ಹಾಗು ಓದುಗನನ್ನು ಆಯಸ್ಕಾಂತದಂತೆ ಹಿಡಿದಿಡುವ ಜಾಣ್ಮೆಗೆ ನನ್ನ ಸಲಾಂ!

ಆಂಗ್ಲ ಲೇಖಕ 'ಡ್ಯಾನ್ ಬ್ರೌನ್' ನ ಮೆಚ್ಚುಗನಾದ ನಾನು ಅವರ ವೈಜ್ಞಾನಿಕ ತಳಹದಿ ಕಾದಂಬರಿ  'ಡಿಸೆಪ್ಶನ್ ಪಾಯಂಟ್' ಓದಿದಾಗ ತುಂಬಾ ಪುಳಕಿತನಾಗಿದ್ದೆ. ಒಬ್ಬ ವಿಜ್ಞಾನಿ ಅಲ್ಲದವ ಖಗೋಳ, ಖಭೌತ ಶಾಸ್ತ್ರದ ಬಗ್ಗೆ ಬರೆಯುವುದೆಂತು ಎಂದು ಆಶ್ಚರ್ಯಪಟ್ಟಿದ್ದೆ ಇಂದು ಡಾ ಎಸ್. ಎಲ್. ಭೈರಪ್ಪ ನವರ 'ಯಾನ' ಓದಿ ಮಾನವನ ಆಸೆಗೆ ಎಲ್ಲೆ ಇದ್ದಿದ್ದರೆ ಮಾನವ ಗುರುತ್ವಾಕರ್ಷಣೆ ನೆಪ ಒಡ್ಡಿ ಇಲ್ಲೇ ಅಡ್ಡಾಡುತ್ತಿದ್ದ ಹಾಗು ಒದ್ದಾಡುತ್ತಿದ್ದ ಎಂಬ ಸತ್ಯ ಗಟ್ಟಿಗೊಳ್ಳುತ್ತದೆ.

ಮಾನವ ಯಂತ್ರ ಆವಿಷ್ಕಾರ ಮಾಡ ಬಹುದು ಅದರಿಂದ ವಿಕ್ರಮ ಸಾಧಿಸಬಹುದು ಆದರೆ ತಾನು ಹುಟ್ಟಿಬಂದ ನೆಲದ, ಧರ್ಮ-ಕರ್ಮದ ಸಂಬಂಧ ಭೂಮಿಯಿಂದ ಕೋಟಿ ಮೈಲು ದೂರವಾದರೂ ಕಳಚಿಕೊಳ್ಳುವುದು ಎಷ್ಟು ಕಷ್ಟವೆಂಬುದನ್ನು ಸೊಗಸಾಗಿ ವರ್ಣಿಸಿದ್ದಾರೆ.

ಕೃತಕ ಎಂಬುವ ಪದ ವಸ್ತುವಿನಿಂದ ಮನುಷ್ಯನ ವಾಸ್ತವತೆಗೆ ( ಕೃತಕಗರ್ಭದಾರಣೆ ಹಾಗು ಬಾಡಿಗೆ ತಾಯ್ತನ )ಹರಡಿರುವುದು ವಿಸ್ಮಯ ಹಾಗು ಮನುಷ್ಯ ತನ್ನ ಸಹಜತೆಯಿಂದ ದೂರವಾಗೋ ಲಕ್ಷಣಗಳೇ ಜಾಸ್ತಿ ಕಾಣಿಸುತ್ತಿದೆ. ಈ ವಿಷಯವನ್ನು ಬಹಳ ಅರ್ಥವಾಗುವ ಹಾಗೆ ಹೇಳಿರುವರು.

ಇಂದಿನ ಪೀಳಿಗೆ ತಮಗೆ ಕೆಲಸ ಸಿಗುವ ಹಾಗು ಸಿಕ್ಕ ಕೆಲಸ ಉಳಿಸುವ  ವಿಷಯವನ್ನು ಮಾತ್ರ ಅಭ್ಯಯಿಸುತ್ತಾರೆ ಹಾಗು ತನ್ನಗೆ ಸಂಭಂದಿಸದ ವಿದ್ಯೆ ಕಲಿಯಲು ಮುಂದುವರಿಯುವುದಿಲ್ಲ ಆದರೆ ಡಾ ಎಸ್. ಎಲ್. ಭೈರಪ್ಪನವರು ಇಂದಿನ ಪೀಳಿಗೆಯ ತಂತ್ರಜ್ಞಾವನ್ನು ಹಾಗು ಯುವಜನತೆಯ ಜೀವನಕ್ರಮವನ್ನು ಬಹಳ ಅಭ್ಯಯಿಸಿ ಬರದಿದ್ದಾರೆ.

ಈ ಅಭೂತಪೂರ್ವ'ಯಾನ'ಕ್ಕೆ ನಮ್ಮನು ಕರೆದುಕೊಂಡು ಹೋದ ನಮ್ಮ ಮೆಚ್ಚಿನ ಸಾಹಿತಿಗೆ ಧನ್ಯವಾದಗಳು ಹಾಗು 'ಯಾನ' ಕನ್ನಡ ಸಾಹಿತ್ಯಲೋಕದಲ್ಲಿ ಹೊಸ ದಾಖಲೆ ಮಾಡಲೆಂದು ಶುಭಾಶಯ ಕೋರುತ್ತೇನೆ.


© ಮಹೇಶ್ ಕಶ್ಯಪ್