Friday, November 1, 2019


ಕನ್ನಡ ರಾಜ್ಯೋತ್ಸವ

ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ , ಕನ್ನಡ ಪ್ರೇಮ, ಕನ್ನಡ ಬಾವುಟ, ಕನ್ನಡ ಶಾಲು, ಕನ್ನಡ ಬಳಸಿದ , ಬೆಳೆಸಿದ , ಮೆರೆಸಿದ ದಿಗ್ಗಜರ ಭಾವಚಿತ್ರಗಳ ಮೆರವಣಿಗೆ, ಪುತ್ಥಳಿಗಳ ನವೀಕರಣ, ಕನ್ನಡ ಹಾಡುಗಳ ಪ್ರಸಾರ, ತಮ್ಮ ತಮ್ಮ ಸಂಘಟನೆಗಳ  ಪ್ರಚಾರ. ಜನ ನಾಯಕರ ಕನ್ನಡ ಉಳಿಸುವ, ಬಳಸುವ ಪಣ , ದಿನ ಕಳೆದಂತೆ ಎಲ್ಲಾ ಬಣ ಬಣ .

ಹೌದು ಇಂದು ಸಂಪ್ರದಾಯದಂತೆ ಕನ್ನಡವನ್ನೂ ನವೆಂಬರ್ ತಿಂಗಳಿಗೆ ಸೀಮಿತಗೊಳಿಸಿದ್ದೇವೇನೋ ಎನ್ನಿಸುತ್ತದೆ, ಕನ್ನಡ ಉಳಿಯುವುದೇ ಅದನ್ನು ಬಳಸುವುದರಿಂದ, ಬೇರಾವ ಮಾರ್ಗವಿಲ್ಲ. ಆಂಗ್ಲ ಭಾಷೆಯ ಬಳಸುವಿಕೆ ಬರಿಯ ಶಾಲೆ , ಬಹುರಾಷ್ಟ್ರೀಯ ಕಚೇರಿಗೆ ಸೀಮಿತವಾಗದೆ ನಮ್ಮ   ಮನೆಯಂಗಳಕ್ಕೆ ಜಿಗಿದು ಮಮ್ಮಿ , ಡ್ಯಾಡಿ ,ಸಿಸ್ ಮತ್ತು ಬ್ರೋಗಳಾಗಿವೆ.
ದಿನಪತ್ರಿಕೆಗಳಿಂದ ಹಿಡಿದು, ತರಕಾರಿ, ದಿನಸಿ  ಅಂಗಡಿಗಳಲ್ಲಿ , ಗ್ರಾಹಕ ಸೇವಾಕೇಂದ್ರಗಳಲ್ಲಿ , ಖಾನಾವಳಿಗಳಲ್ಲಿ, ಜಾಲತಾಣಗಳಲ್ಲಿ  ಕನ್ನಡವನ್ನು ಜಾಲಾಡಿಸಿ  ನೋಡಬೇಕಾಗಿದೆ ಮತ್ತು ಕನ್ನಡ ಮಾತಾಡಿದರೆ ನಮ್ಮನ್ನು  ನಮ್ಮ ನಾಡಲ್ಲೇ ಅನ್ಯಗ್ರಹದಿಂದ ಬಂದವರಂತೆ ಕಾಣುತ್ತಾರೆ.
ನಮಗೆ ಬೇರೆ ಯಾವುದೇ ಭಾಷೆಯ ಬಗ್ಗೆ ತಾತ್ಸಾರವಾಗಲಿ, ಅಗೌರವವಾಗಲಿ ಇಲ್ಲ. ಆದರೆ ನಮ್ಮ ನಾಡಿನ ನೆಲದ ಭಾಷೆಯ ಬಗ್ಗೆ ಇರುವ ಮಮಕಾರವಷ್ಟೆ. ಒಂದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತಾಯಿಯ ಮಹತ್ವ ಹೇಗೊಹಾಗೆ ಒಂದು ನೆಲದ ಸರ್ವಾಂಗೀಣ  ಬೆಳವಣಿಗೆಗೆ ತನ್ನ ತಾಯಿ ಭಾಷೆಯೇ ಬೇರು. ಹಾಗು ಆ ಬೇರಿಗೆ ಸರಿಯಾದ ಪೋಷಣೆ ಮಾಡಿದರೆ ಮುಂದೆ ಅದೇ ಹೆಮ್ಮರವಾಗಿ ಬೆಳೆದು ನಮ್ಮ ಸಂಸ್ಕೃತಿಯ ಸುಗಂಧವನ್ನು ಮತ್ತಷ್ಟು ಪಸರಿಸಲು ಸಾಧ್ಯ.

ನವೆಂಬರಿನಲ್ಲಿ ಕನ್ನಡದ ಬಗ್ಗೆ  ಇಷ್ಟೆಲ್ಲಾ  ಜಾಗೃತವಾಗುವ ನಾವು. ಅದನ್ನು ಉಳಿಸುವ, ಬಳಸುವ ಮನಸ್ಸು ಮಾಡಿ ಅದನ್ನು ಕಾರ್ಯಕ್ಕೆ ತರಲು ಮಾತ್ರ ಯಥಾ ಪ್ರಕಾರ ಕನ್ನಡ ಸಂಘ ಸಂಸ್ಥೆಗಳ  ಹೆಗಲ ಮೇಲೆ ಹಾಕಿ ನಮ್ಮ ಎಂದಿನ  ಧೋರಣೆಗೆ ಜಾರುತ್ತೇವೆ. ಕನ್ನಡ ಬೆಳೆಸಬೇಕಾದ್ದು ಇಲ್ಲಿನ ಜನರಾದ ನಾವೇ ಹೊರತು ಅದನ್ನು ಯಾವುದೇ ಸಂಸ್ಥೆಗೆ ಗುತ್ತಿಗೆ ಕೊಡಲು ಸಾಧ್ಯವಿಲ್ಲ . ಕನ್ನಡ  ನಾಡಿನವರಾದ ನಾವು ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನಾರು ಪಡಬೇಕು ? ಕನ್ನಡವೇನು ಇತ್ತೀಚೆಗಷ್ಟೇ ಉದಯಿಸಿದ ಭಾಷೆಯಲ್ಲ, ಆಂಗ್ಲ ಭಾಷೆ ಹುಟ್ಟುವುದಕ್ಕೆ ಎಷ್ಟೋ ಶತಮಾನಗಳ ಹಿಂದಿನಿಂದ ಬಳಕೆಯಲ್ಲಿರುವ ಭಾಷೆ ಹಾಗೂ ಜಗತ್ತಿನಲ್ಲೇ ಅತೀ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು, ಇದನ್ನು ಕಂಡೇ  ಕನ್ನಡಕ್ಕೆ 'ಶಾಸ್ತ್ರೀಯ ಭಾಷೆ' ಯ ಸ್ಥಾನ ದೊರಕಿರುವುದು.  

೧೬ನೇ ಶತಮಾನದಲ್ಲಿ ಹುಟ್ಟಿದ ಷೇಕ್ಸ್ ಪಿಯರ್ ನ ಎಷ್ಟೋ ಶತಮಾನಗಳ ಮುಂಚೆಯೇ ಕನ್ನಡದ ಎಷ್ಟೋ  ಷೇಕ್ಸ್ ಪಿಯರ್ ಗಳು ಕನ್ನಡವನ್ನು  ದಶ ದಿಕ್ಕುಗಳಿಗೆ ಹಬ್ಬಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಒಂದೇ ಉಚ್ಛಾರಣೆಗೆ ಹಲವು  ಪದಗಳಿರುತ್ತವೆ ಹಾಗು ಎಷ್ಟೋ ಬಾರಿ ಅವುಗಳು ಗೊಂದಲವು ಆಗುತ್ತದೆ ಉದಾಹರಣೆಗೆ : sole , soul , write , right  ಆದರೆ ಕನ್ನಡದಲ್ಲಿ ಒಂದೇ ಅರ್ಥಕ್ಕೆ ಹಲವು ಪದಗಳಿರುತ್ತವೆ ಹಾಗು ಭಾಷಾ ಪ್ರಯೋಗಕ್ಕೆ ಅವಕಾಶಗಳು ಬಹಳವಿದ್ದಂತೆ ಉದಾಹರಣೆಗೆ: ಗಿರಿ, ಶಿಖರ, ಶೃಂಗ . ಕನ್ನಡ ಭಾಷೆ ಇಷ್ಟು ವರ್ಷವಾದರೂ ಏಕೆ ಪ್ರಸ್ತುತವೆಂದರೆ ಈಗಿನ ತಂತ್ರಜ್ಞಾನ ಯುಗದಲ್ಲಿ ಎಷ್ಟೋ ಹೊಸ ಹೊಸ ಪದಗಳು ಹುಟ್ಟಿಕೊಳ್ಳುತ್ತವೆ  ಆ ಪದಗಳಿಗೆ ಸರಿಸಮನಾದ ಪದ ನಮ್ಮ ಭಾಷೆಯಲ್ಲಿ ಇಲ್ಲವಾದರೆ ಭಾಷೆ ಸಾಯುತ್ತಾ ಬರುತ್ತದೆ ಆದರೆ ಕನ್ನಡ ಹಾಗಲ್ಲ !ಎಷ್ಟು ಹೊಸ ವಸ್ತುಗಳು , ತಂತ್ರಜ್ಞಾನದ ಪದಗಳು ಆವಿಷ್ಕಾರವಾದಂತೆ ಕನ್ನಡವೂ ಸಹ ಅದನ್ನು ನಮ್ಮದಾಗಿಸುತ್ತಿದೆ ಉದಾಹರಣೆಗೆ: software ( ತಂತ್ರಾಂಶ ), keyboard  ( ಕೀಲಿಮಣೆ  ), mobile  ( ಜಂಗಮವಾಣಿ ) ಇತ್ಯಾದಿ . ಕನ್ನಡದ ಇನ್ನೊಂದು ಹೆಮ್ಮೆಯಂದರೆ ನಾವು ನುಡಿದಂತೆ ಬರೆಯಲು ಅಕ್ಷರಗಳ ಸೌಲಭ್ಯವಿದೆ  ಉದಾಹರಣೆಗೆ:  , ,       ಇತ್ಯಾದಿ .

ಕನ್ನಡ ಭಾಷೆಯನ್ನು ಉಳಿಸಿ ಬೆಳಸಿ ಎನ್ನುವುದು ಅದು ಹುಟ್ಟಿದ ನಮ್ಮ ನಾಡಿನಲ್ಲೇ ಹೊರತು ಇನ್ನಾವ ರಾಜ್ಯಗಳಲ್ಲಲ್ಲ. ಮೊದಲೇ ಹೇಳಿದಂತೆ ಕನ್ನಡ ಉಳಿಸುವುದೆಂದರೆ ಅದನ್ನು ಬಳಸುವುದರಿಂದ, ನಾವು ನಮ್ಮ ನಿತ್ಯದ ವ್ಯವಹಾರವನ ಆದಷ್ಟು ಕನ್ನಡ ಬಳಸಬೇಕು ಹೀಗೆ ಮಾಡಿದರೆ ಅನ್ಯ ರಾಜ್ಯಗಳಿಂದ ಬಂದವರನ್ನು ಕನ್ನಡ ಮಾತನಾಡುವುದಿಲ್ಲ ಎಂದು ದೂಷಿಸುವ ಅಗತ್ಯವಿರುವುದಿಲ್ಲ , ನಾವು ಹೇಗೆ ಹೊರ ರಾಜ್ಯಗಳಿಗೆ ಹೋದಾಗ  ಅವರ ಭಾಷೆಯಲ್ಲಿ ವ್ಯವಹರಿಸುತ್ತೇವೊ  ಅವರೂ  ಸಹಾ ಇಲ್ಲಿರುವಾಗ    ಕನ್ನಡವನ್ನು  ಉಪಯೋಗಿಸುವ ವಾತಾವರಣವನ್ನು  ದಬ್ಬಾಳಿಕೆ ಇಲ್ಲದೆ ಸೃಷ್ಟಿಸಬೇಕು.  ಅದು ಹೇಗೆಂದರೆ  ನಾವುಗಳು ಆದಷ್ಟು ನಮ್ಮ ಭಾಷೆಯಲ್ಲಿ ಮಾತನಾಡಿ  ಪ್ರೀತಿಯಿಂದ ಹಾಗು ತಾಳ್ಮೆಯಿಂದ ಅವರಿಗೆ ಭಾಷೆ ಕಲಿತುಕೊಳ್ಳುವ ಹಾಗೆ ಅವಕಾಶ ಮಾಡಿಕೊಡಬೇಕು. ಆದರೆ  ನಾವುಗಳು ಹೀಗೆ ಮಾಡದೆ ಅವರ ಭಾಷೆಯಲ್ಲೇ ಮಾತಾಡಿ ನಮ್ಮ ಭಾಷೆ ಕಲಿತುಕೊಳ್ಳದ ಹಾಗೆ ಮಾಡಿದ್ದೇವೆ, ಇದಕ್ಕೆ ದೂಷಿಸಬೇಕಾದ್ದು ಯಾರನ್ನ ?

ಕನ್ನಡದ ಆಕರ್ಷಣೆ ಎಷ್ಟೋ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಕರ್ನಾಟಕಕ್ಕೆ ಬಂದು ಕನ್ನಡವನ್ನು ನಿರರ್ಗಳವಾಗಿ ಮಾತನಾಡುವಂತೆ ಮಾಡಿದೆ, ಹಲವು ಅಧಿಕಾರಿಗಳಿಗೆ ಕನ್ನಡ ಭಾಷೆಯ ಬಿ.ಎ , ಎಂ.ಎ ಮಾಡುವಂತೆ ಆಕರ್ಷಿಸಿದೆ , ಕೆಲವು ಅಧಿಕಾರಿಗಳಂತೂ ಕನ್ನಡಭಾಷೆಯಲ್ಲಿ ಡಾಕ್ಟರೇಟ್  ಕೂಡ ಪಡೆದಿದ್ದಾರೆ ಹಾಗು ಕೆಲವರು ತಮ್ಮ ಕನ್ನಡ ಪ್ರೀತಿಯನ್ನು ಕನ್ನಡ ಪತ್ರಿಕೆಗಳಲ್ಲಿ ಅಂಕಣ ಬರೆದು ಮತ್ತು ಪುಸ್ತಕಗಳನ್ನೂ ಹೊರತಂದಿದ್ದಾರೆ. ಇದರಿಂದ ಒಂದಂತೂ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಅವರುಗಳಿಗೆಲ್ಲಾ  ಕನ್ನಡ ಕಲಿಯಲು ಪ್ರೋತ್ಸಾಹಿಸಿದ್ದು  ಮೊದಲಿಗೆ  ಅನಿವಾರ್ಯ ಕಾರಣದಿಂದ  ಏಕೆಂದರೆ ನಮ್ಮ ಆಡಳಿತ ಭಾಷೆ ಕನ್ನಡ,  ಇನ್ನೊಂದು ಕನ್ನಡ ಕಲಿಯುವಾಗ ಕಲಿಸುವಾತನ ಕನ್ನಡ ಪ್ರೇಮ ಹಾಗು ಕನ್ನಡ ಭಾಷೆಗೆ ಇರುವ ಸಾಮರ್ಥ್ಯ. ನಾವೂ  ಸಹ ಸಾಧ್ಯವಿದ್ದಲ್ಲಿ  ಕನ್ನಡದಲ್ಲೇ ವ್ಯವಹರಿಸಬೇಕು ಕನ್ನಡ ದಿನಪತ್ರಿಕೆ, ಕನ್ನಡ ಪುಸ್ತಕಗಳನ್ನು ಓದುವುದು , ದಿನ ನಿತ್ಯ ವ್ಯವಹಾರಗಳಲ್ಲಿ ಅಂದರೆ ಅಂಗಡಿಗಳಲ್ಲಿ , ಬಸ್ಸಿನಲ್ಲಿ, ರೈಲುಗಳಲ್ಲಿ , ಬ್ಯಾಂಕು , ಮಾಲುಗಳಲ್ಲಿ , ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ , ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲೇ ವ್ಯವಹರಿಸೋಣ , ಎಷ್ಟೋ ಬಾರಿ ನಾವು ಗ್ರಾಹಕ ಸೇವಾ ಕೇಂದ್ರಗಳಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡುವ ಸೌಲಭ್ಯವಿದ್ದರೂ ನಾವು ಆಂಗ್ಲ ಭಾಷೆಯಲ್ಲಿ ವ್ಯವಹರಿಸುವುದರಿಂದ  ಎಷ್ಟೋ ಗ್ರಾಹಕ ಸೇವಾಕೇಂದ್ರಗಳು ಕನ್ನಡ ಭಾಷಿಕರನ್ನು ಸೇವೆಗೆ ತೆಗೆದು ಕೊಳ್ಳುವುದಿಲ್ಲ ಏಕೆಂದರೆ ಅವರ ಅಗತ್ಯ ಬರುವುದೇ ಇಲ್ಲ .ಇದ್ದಕ್ಕೆಲ್ಲಾ ನಮ್ಮ ತಾತ್ಸಾರವೇ ಕಾರಣ . ಇದರಿಂದ ನಷ್ಟ ಆಗುವುದು ಕನ್ನಡ ಮಾತ್ರ  ಬರುವ ಗ್ರಾಹಕರಿಗೆ  ಏಕೆಂದರೆ ಅವರುಗಳು  ಈ ಸೇವಾ ಕೇಂದ್ರಕ್ಕೆ ಕರೆಮಾಡಿದರೆ ಕನ್ನಡ ಬಾರದ ವ್ಯಕ್ತಿ  ಮಾತನಾಡಿ ಕನ್ನಡ ಗ್ರಾಹಕರಿಗೆ ಅವರಿಗೆ ಮೀಸಲಿದ್ದ  ಸೇವೆ ಪಡೆದುಕೊಳ್ಳುವ ಅವಕಾಶದಿಂದ ವಂಚಿತರಾಗುತ್ತಾರೆ . ನಾವು ನಮ್ಮ ಭಾಷೆಯನ್ನು  ಹೆಚ್ಚು   ಬಳಸಿದಾಗ ಅನ್ಯಭಾಷಿಕರೂ  ಸಹ ಕನ್ನಡವನ್ನು   ಬಳಸುತ್ತಾರೆ ನಮ್ಮ ಸಂಸ್ಕೃತಿ ಗೆ ಅವರು ಇನ್ನಷ್ಟು ಹತ್ತಿರವಾಗುತ್ತಾರೆ.

ಆಂಗ್ಲ ಹುಟ್ಟಿದ್ದು  ಯೂರೋಪ್ ಖಂಡದ ಇಂಗ್ಲೆಂಡಿನಲ್ಲೇ ಆದರೂ ಯೂರೋಪಿನ ಇನ್ಯಾವುದೇ ದೇಶವು ಆಂಗ್ಲ ಭಾಷೆಗೆ  ಮಾನ್ಯತೆ ನೀಡಿಲ್ಲ. ಅವರು ಆಂಗ್ಲವನ್ನು ಉಪಯೋಗಿಸುವುದೂ ಇಲ್ಲ. ಅಷ್ಟೇ ಏಕೆ ಅವರಿಗೆ ಆಂಗ್ಲ ಭಾಷೆಯೇ ಬಾರದು. ಆದರೆ ಆಂಗ್ಲವನ್ನು ನಾವು ವಿಧ್ಯಾಭ್ಯಾಸದಿಂದ ಹಿಡಿದು ನೌಕರಿಯ ತನಕ  ಉಪಯೋಗಿಸುತ್ತಿದ್ದೇವೆ,ಸದ್ಯಕ್ಕೆ  ಬೇರೆ ಮಾರ್ಗವಿಲ್ಲ.ಆದರೂ ನಮ್ಮ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು, ಆಂಗ್ಲವನ್ನು ಸೀಮಿತವಾಗಿ ಬಳಸಿ ಅದು ಶಾಲೆ ಅಥವ ನೌಕರಿಯ ಅಂಗಳದಿಂದ ಬೇರೆಡೆಗೆ ಹರಡಲು ಬಿಡಬೇಡಿ. ಎಲ್ಲಾ ಭಾಷೆಗಳಿಗೂ ಒಂದು ಗಡಿಯಿದೆ, ಅದರಂತೆ ಕನ್ನಡಕ್ಕೆ ಇರುವುದು ಕರ್ನಾಟಕವೆನ್ನುವ ಗಡಿ, ಆದ್ದರಿಂದ ನಮ್ಮ ತಾಯಿಯನ್ನು ಪ್ರೀತಿಸಿದಂತೆ, ಆರಾಧಿಸಿದಂತೆ ನಾವು ನಮ್ಮ ತಾಯಿ ನುಡಿಯಾದ ಕನ್ನಡವನ್ನು ಪ್ರೀತಿಸಬೇಕು , ಆರಾಧಿಸಬೇಕು. ತಾಯಿಗೆ ಮಕ್ಕಳಲ್ಲದೇ ಬೇರಾರು ಕಾಪಾಡಬೇಕು ಹೇಳಿ?

Tuesday, July 16, 2019

ಅಮ್ಮ ಹೇಳಿದ ಅನ್ನದ ಮಹತ್ವ


ನಾನು ಶಾಲೆಯಲ್ಲಿ ಓದುತಿದ್ದ ಸಮಯ,  ಎಲ್ಲಾ   ಮಕ್ಕಳಂತೆ ಊಟದ ಡಬ್ಬಿ ಯನ್ನು ಪೂರ್ತಿ ಖಾಲಿ  ಮಾಡದೆ ಮನೆಗೆ  ಹಿಂದುರುಗಿ ಬರುವ ಚಾಳಿ ಬೆಳೆಸಿಕೊಂಡಿದ್ದೆ. ದಿನವೂ ಅಮ್ಮ ನಾನು ಶಾಲೆಯಿಂದ ಬಂದಮೇಲೆ ನನ್ನ ಡಬ್ಬಿ ಪರೀಕ್ಷಿಸಿ  'ಊಟ ಏಕೆ  ಬಿಟ್ಟೆ ಅಂತ' ಕೇಳಿದರೆ ನಾನು ಬೇಕಾಬಿಟ್ಟಿಯಾಗಿ 'ನನಗೆ ಆ ತರಕಾರಿ ಸೇರೊಲ್ಲಾ  ಈ  ತರಕಾರಿ ರುಚಿಸೋಲ್ಲಾ ಅಂತ ರಾಗ ಎಳೆಯುತ್ತಿದ್ದೆ ', ಇದು ಹೀಗೆ ತುಂಬಾ ದಿವಸ  ಕಳೆಯಿತು. ಒಂದು ದಿವಸ ಎಂದಿನಂತೆ ನಾನು ಡಬ್ಬಿ ಖಾಲಿ ಮಾಡದೆ ಬಂದಾಗ ಅಮ್ಮ ಏನೂ ಬಯ್ಯಲಿಲ್ಲ ಆದರೆ ನನ್ನ ಜೊತೆ ಮಾತನಾಡಲೂ  ಇಲ್ಲ , ಅಮ್ಮ ಕೋಪಗೊಂಡಿದ್ದು ಬಹಳ ಕಡಿಮೆ ಆದರೆ ಮುನಿಸಿಕೊಂಡರೆ ಅವಳನ್ನು ಸಮಾಧಾನಗೊಳಿಸುವುದು ಕಷ್ಟದ ಕೆಲಸ, ನನಗೆ ಆವಾಗ ಅಪ್ಪನ ಜೊತೆಗಿಂತ ಅಮ್ಮನ  ಒಡನಾಟವೇ ಹೆಚ್ಚು ಆದರೆ ಅಮ್ಮ ಉಮ್ ಅಂತಲೇ  ಇದ್ದಳು , ನಾನು ನನ್ನ ಸರ್ವ ಪ್ರಯತ್ನವೂ ಮಾಡಿದರು ಅಮ್ಮ ಕರಗಲೇ  ಇಲ್ಲ  ನನಗೂ  ದಿಕ್ಕು ತೋಚಲೇ  ಇಲ್ಲ , ಕೊನೆಗೆ ಅಳುತ್ತ  'ಏಕೆ ನನ್ನ ಮೇಲೆ ಕೋಪ ಅಮ್ಮ ?' ಅಂದಾಗ  ಅಮ್ಮ ಏನೋ  ಹೇಳಬೇಕೆಂದು  ಪ್ರಯತ್ನಿಸಿ  ಆಗದೆ ಗದ್ಗದಿತಳಾದಳು, ಅಮ್ಮನನ್ನು ನಾನು  ಎಂದಿಗೂ ಹಾಗೆ ನೋಡಿರಲಿಲ್ಲ ಅಮ್ಮನೇ  ಅಳುವಾಗ  ಇನ್ನೂ ಗಾಬರಿಯಾಗಿ ಯಾಕಮ್ಮ ಅಂತ ಕೇಳಲು ಅಮ್ಮ ಅಂದಳು ' ನಿಮ್ಮ ತಾತ  ಜ್ಞಾಪಕಕ್ಕೆ  ಬಂದರು  ' ಅಂತ ಹೇಳಿ ಮೌನಿಯಾದಳು . ನಾನು ಸಾವರಿಸಿಕೊಂಡು ಅಮ್ಮ  ಯಾಕಮ್ಮ ತಾತ ನೆನಪಿಗೆ ಬಂದರು ಯಾಕೆ ನೀನು ಅಳುತ್ತಿರುವೆ  ಅಂದಾಗ ಅಮ್ಮ  ತನ್ನ ಬಾಲ್ಯದ ಒಂದು ಪ್ರಸಂಗ ಹೇಳಿದಳು .

ಅಮ್ಮ  ಬಡತನದ ಕುಟುಂಬದಿಂದ ಬಂದವಳು ( ಅಪ್ಪ ಹೊರತಲ್ಲ) ನಮ್ಮ ತಾತ  ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆಹಾರ ಪಥ್ಯೆ ನೋಡಿಕೊಳ್ಳುವ ಸಾಮಾನ್ಯ ದರ್ಜೆ  ಗುಮಾಸ್ತ , ಬಡತನವಿದ್ದರೂ ಹೃದಯ ಶ್ರೀಮಂತಿಕೆಯ ವ್ಯಕ್ತಿ , ಆಜಾನು ಬಾಹು,  ರಕ್ತ ಚಿಮ್ಮುವಂತ ಮೈಬಣ್ಣದ  ವ್ಯಕ್ತಿ,  ತನ್ನ ಸಂಗಡಿಗರಿಗೆ ಹಾಗೂ  ನೆರೆ ಹೊರೆಯವರಿಗೆ   ಬಹಳ ಆದರ್ಶ  ತುಂಬಿದವ್ಯಕ್ತಿ ,  ತನ್ನ ಮಕ್ಕಳಿಗಂತೂ  ಬಹಳ ಆಪ್ಯಾಯಮಾನವಾದ ಅಪ್ಪ . ಎಷ್ಟೇ ದುಡಿದರೂ  ಮೂರು ಹೊತ್ತಿನ  ಊಟಕ್ಕೆ   ಸಾಲುತ್ತಿರಲಿಲ್ಲ , ಮಕ್ಕಳು ಅಪ್ಪನ ಸ್ಥಿತಿಯನ್ನು ಕಂಡು ಅವರಿಗೆ ಮತ್ತೂ ಹೊರೆಯಾಗದಂತೆ ಅಪ್ಪನಿಗೆ ತಿಳಿಯದ ಹಾಗೆ ಕಾಗದ ಚೀಲ ಮಾಡಿ , ಅಗರಬತ್ತಿ  ಹೊಸೆದು ಹಣ ಸಂಪಾದನೆ ಮಾಡಿ ಅಪ್ಪನಿಗೆ ಹೊರೆಯಾಗದಂತೆ ಮನೆಗೆ ಸಾಬೂನು, ಟೂಥ್  ಪೇಸ್ಟ್ , ಪೆನ್ಸಿಲ್ಲು , ಪೆನ್ನು ಹೀಗೆ ಆದಷ್ಟು ಮಟ್ಟಿಗೆ ಅಪ್ಪನ ಹೊರೆಯನ್ನು ತಗ್ಗಿಸಲು ಅಪ್ಪನಿಗೆ ಸರ್ವ ಪ್ರಯತ್ನ  ಮಾಡುತ್ತಿದ್ದರು, ಅಪ್ಪನ ಪ್ರೀತಿ ಮಕ್ಕಳಿಗೆ  ತಮ್ಮ ಬಡತನ ಮರೆಸುತ್ತಿತ್ತು . ಅಪ್ಪನಿಗೆ ಮಕ್ಕಳ ಬಗ್ಗೆ ಎಲ್ಲಿಲದ ಹೆಮ್ಮೆ , ಯಾಕೆಂದರೆ ಅಪ್ಪನಲ್ಲಿ ಎಂದಿಗೂ ಏನನ್ನೂ ಸಹ ಬೇಕು ಅಂತ ಹಠ ಮಾಡದ ಮಕ್ಕಳು , ಆದರೆ ಅಪ್ಪನಿಗೆ ತಾನು ಮಕ್ಕಳಿಗೆ ಮೂರು ಹೊತ್ತಿನ ಊಟ ಹಾಕಲು ಸಾದ್ಯವಾಗುತ್ತಿಲ್ಲವಲ್ಲ ಎಂಬ ಕೊರಗು, ಹೀಗೆ ಒಂದು ದಿನ ತನ್ನ ಕೆಲಸದ ವೇಳೆ ನಮ್ಮ ತಾತ ಸಹುದ್ಯೋಗಿ ಗಳೊಂದಿಗೆ ಮಕ್ಕಳಿಗೆ ಸರಿಯಾಗಿ ಊಟಹಾಕಲು ಆಗುತ್ತಿಲ್ಲವಲ್ಲ ಎಂಬ ಕೊರಗು ತೋಡಿಕೊಂಡಾಗ  ಸಹುದ್ಯೋಗಿ ಒಬ್ಬರು ತಾತನಿಗೆ ಹೇಳಿದರಂತೆ ' ಏಕೆ ಬೇಜಾರು ಪಡುವೆ, ನಮ್ಮ ಆಸ್ಪತ್ರೆ ಅಡುಗೆ ಮನೆಯಲ್ಲಿ ದಿನವೂ ರೋಗಿಗಳಿಗೆ ಆಹಾರ ನೀಡಿದ ಮೇಲೆ  ಮಿಕ್ಕುವ  ಎಷ್ಟೋ ಅನ್ನವನ್ನು ಎಸೆಯುತ್ತಾರೆ , ಹಾಗಿದ್ದಾಗ ಯಾಕೆ ನೀನು ಮನೆಗೆ ಸ್ವಲ್ಪ ಅನ್ನವನ್ನು ತೆಗೆದು ಕೊಂಡು ಹೋಗಬಾರದು? ಆಗ  ಮಕ್ಕಳಿಗೆ ಊಟ ಸಿಕ್ಕಿದಂತಾಗುತ್ತದೆ' ಎಂದಾಗ ತಾತನಿಗೂ ಅದು ಸರಿ ಅನ್ನಿಸಿ ಅಂದು ಮಧ್ಯಾನ್ಹ  ತಮ್ಮ ಪಾಳಿ ಮುಗಿಸಿಕೊಂಡು ಬರುವ ಮುನ್ನ ಮೇಲಧಿಕಾರಿಗಳಿಗೆ ತಿಳಿಯದಂತೆ ಒಂದು  ಟವಲ್ಲಿಗೆ  ಬಿಸಿ ಅನ್ನವನ್ನು  ಹರಡಿಕೊಂಡು ಅದನ್ನು ಬೆನ್ನಿಗೆ ಕಟ್ಟಿಕೊಂಡು ಅದರ ಮೇಲೆ ತಮ್ಮ ಜುಬ್ಬವನ್ನು  ಹಾಕಿ ಕೊಂಡು ಮನೆಯ ಕಡೆ ನಡೆದು ಹೊರಟರಂತೆ , ಆಗತಾನೆ ಬಸಿದಿದ್ದ ಅನ್ನದ ಬಿಸಿ ಬೆನ್ನಿನ  ಚರ್ಮ ಸುಡಲು ಪ್ರಾರಂಭಿಸಿದರೂ ಅದರ ಚಿಂತೆ ಮಾಡದೆ ಮನೆ ಸೇರಿದರಂತೆ . ಅಪ್ಪನ ಬರುವಿಕೆ  ಕಾದಿದ್ದ ಮಕ್ಕಳು ಅಪ್ಪ  ಗಡಿಬಿಡಿ ಯಲ್ಲಿ ಬಂದು ಬೆನ್ನಿಗೆ  ಸುತ್ತಿದ್ದ ಅನ್ನದ   ಟವಲನ್ನು ಬಿಚ್ಚಿಟ್ಟರಂತೆ , ಮಕ್ಕಳು ಅಪ್ಪನ್ನ ಬೆನ್ನು  ನೋಡಿದರೆ   ಕೆಂಪಗೆ ಬೆನ್ನ  ಸುತ್ತಲೂ  ಬೊಬ್ಬೆ ಇದ್ದದು ಕಂಡು ಚೀರಿದರಂತೆ ' ಅಣ್ಣಾ ! ಏನಿದು ಯಾಕೆ ಹೀಗೆ ಮಾಡಿದಿರಿ ಅಂದರೆ ?'  ತಾತ  ಹೇಳಿದರಂತೆ  ' ಅಪ್ಪನಾಗಿ ಮಕ್ಕಳನ್ನು ಹಸಿವಿನಿಂದ ದೂರಮಾಡಲು ಹೀಗೆ ಮಾಡಿದೆ , ಏನು ಮಾಡಲಿ  ದೇವರಂತ ಮಕ್ಕಳಿಗೆ  ಹೊಟ್ಟೆ ತುಂಬಾ ಊಟ ಹಾಕಲು ಆಗುತ್ತಿಲ್ಲವಲ್ಲ  ಎಂದು ಹೀಗೆ ಮಾಡಿದೆ ಅಂದರಂತೆ ' , ಮಕ್ಕಳು ಅಪ್ಪನ ವಾತ್ಸಲ್ಯ ನೆನೆದು ಇಂದಿಗೂ ಸಹ  ಅನ್ನವನ್ನೋ  ಅಥವ ಆಹಾರವನ್ನೋ  ಚೆಲ್ಲುವುದು  ಕಂಡಾಗಲೆಲ್ಲ ಅಪ್ಪನ ಆ ದಿನದ ನೋವು  ಕಣ್ಣಿಗೆ ಬರುತ್ತದೆ  ಅನುತ್ತಾರೆ ಹಾಗು ಅಂದಿನಿಂದ  ಅನ್ನವನ್ನು   ಒಂದಿಷ್ಟು ಚೆಲ್ಲಲು  ಮನಸ್ಸು  ಬರುವುದಿಲ್ಲ  ಎಂದು ಅಮ್ಮ ನೆನದು ಮತ್ತೆ ಗದ್ಗದಿತರಾದರು .

ಅಮ್ಮ ಹೇಳಿದ  ಪ್ರಸಂಗ ನನಗೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ ಹಾಗು ನಾನು ಕೂಡ  ಸಾಧ್ಯವಾದಷ್ಟು ಒಂಚೂರು ಚೆಲ್ಲದಂತೆ  ಊಟ ಮಾಡಲು  ಪ್ರಯತ್ನ ಪಡುತ್ತೇನೆ  ಹಾಗು ನನ್ನ ಮಗಳಿಗೂ  ಆಹಾರ ಚೆಲ್ಲದಂತೆ ಆದಷ್ಟು ನಿಗಾ ವಹಿಸಲು ಪ್ರೋತ್ಸಾಹಿಸುತ್ತೇನೆ .

ಕಷ್ಟ  ಪಟ್ಟು ಸಂಪಾದಿಸಿದಿದ ಆಹಾರವನ್ನು ಕಸಕ್ಕೆ ಚೆಲ್ಲುವುದು ಎಷ್ಟು ನ್ಯಾಯ ಹೇಳಿ  ನಾವು ಚೆಲ್ಲುವ ಆಹಾರ ಎಷ್ಟೋ ಹಸಿದವರ ಪಾಲಿನಿಂದ ಕಸಿದಂತೆ, ಇದೂ ಕೂಡ ಪಾಪಕ್ಕೆ ಸಮ. ನಮಗೆ ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಸಾಧ್ಯವಾದಷ್ಟು ಚೆಲ್ಲದಂತೆ ತಿನ್ನೋಣ ಹಾಗು  ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗಿ ಈ ನಮ್ಮ   ಗುಣವನ್ನು ಅನುಕರಿಸುವಂತೆ ಮಾಡೋಣ .

Monday, September 28, 2015

ಬದಲಾದ ಭಾರತ ಅಂದು ಇಂದು


ಹತ್ತು ಹದಿನೈದು ವರ್ಷಗಳ ಹಿಂದೆ ಐಟಿ ಅಳವಡಿಸುವಾಗ ಜನರ ನಿರುತ್ಸಾಹ, ತಾತ್ಸಾರ
ಇದರಿಂದ ಏನು ಪ್ರಯೋಜನ ? ಐಟಿ ಓದಿದವರಿಗೆ ಮಾತ್ರ ಲಾಭ, ಇದರಿಂದ ಜನ ಸಾಮಾನ್ಯರಿಗೆ ಯಾವ ಪ್ರಯೋಜನ ? ಎಂದವರೇ ಹೆಚ್ಚು. ಇಂದು ಲಾಭಪಡೆದೂ ಸಹ
ಭಾರತ ಏನೂ ಬದಲಾಗಿಲ್ಲ ಎನ್ನುವರು ಕಡಿಮೆ ಇಲ್ಲ. ಆದರೆ ಹಲವು ದಶಕಗಳಿಂದ ಜಡತ್ವ ಕಂಡ ನಮಗೆ ಕೆಳಗಿನಕೆಲವು ಬದಲಾವಣೆ ಕಂಡಿದ್ದರೆ ಖುಷಿ ಪಡೋಣ ಹಾಗೂ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೋಣ ಅಲ್ವಾ!
ನಮ್ಮ ಹಣ ವಾಪಸ್ಸು ಪಡೆಯಲು ಸರತಿಯಲ್ಲಿ ನಿಂತು, ಗೋಗರೆದು, ಕೈಮುಗಿದು ದಿನ ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಅಲೆಯುತ್ತಿದ್ದ ಪ್ರಸಂಗಗಳು ಕಂಡ ನಮಗೆ, ಇಂದು ಯಾರನ್ನೂ ದಮ್ಮಯ್ಯ ಅನ್ನದೆ ಕೆಲವು ಕ್ಷೇತ್ರದಲ್ಲಿ ( ಬ್ಯಾಂಕಿಂಗ್, ಪಿ ಎಫ್, ವಿಮೆ, ಸಾರಿಗೆ, ತೆರಿಗೆ ಹಾಗು ಇನ್ನೂ ಹಲವು ) ಅಂತರ್ಜಾಲ ಬಂದು ಆಮೂಲಾಗ್ರ ಬದಲಾವಣೆ ಕಂಡಿದ್ದೇವೆ.
ಹಣ ಪಾವತಿ ಮಾಡಲು ಅಂತರ್ಜಾಲ ಬಂದು ನಮ್ಮ ದಿನಚರಿಯಲ್ಲಿ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಾಗಿ ಭ್ರಷ್ಟತೆ ತಗ್ಗಿದೆ, ಯಾರಿಗೂ ಗೊಡ್ಡು ಸಲಾಮು ಹೊಡೆಯದೆ ನಮ್ಮ ಹಕ್ಕಿನ ಸೇವೆಯ ಲಾಭ ಪಡೆಯುವಂತಾಗಿದೆ.
ಬದಲಾದ ಚಿತ್ರಣವೆಂದರೆ ಅಂದು ಬ್ಯಾಂಕುಗಳಲ್ಲಿ ನಮ್ಮ ಖಾತೆಯ ಹಣ ಪಡೆಯಲು ಹಾಗೂ ಸಾಲ ಪಡೆಯಲು ಬೇಡ ಬೇಕಾಗಿತ್ತು ಇಂದು ನಮಗೆ ಬೇಡವೆಂದರೂ ಸಾಲ ಕೊಡಲು ಬ್ಯಾಂಕುಗಳು ಸಂಪರ್ಕಿಸುತ್ತವೆ. ಹಿಂದೆ ಬ್ಯಾಂಕಿನ ಯಾವುದೇ ವ್ಯವಹಾರ ಸುಸೂತ್ರವಾಗಿ
ಮುಗಿಯಲು ನಮಗೆ ಪರಿಚಯವಿದ್ದರೆ ಮಾತ್ರ ಅನ್ನುವ ಹಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಇನ್ನು ಸಾರಿಗೆ ಕ್ಷೇತ್ರಕ್ಕೆ ಬಂದರೆ, ಪರಸ್ಥಳಕ್ಕೆ ಹೋಗಲು ಮುಂಗಡವಾಗಿ ಟಿಕೇಟು ಪಡೆಯಲು ಆಯ ನಿಲ್ದಾಣಕ್ಕೆ ಹೋಗಿ ಸಿಂಬಂಧಿ ಇದ್ದರೆ ಹಾಗೂ ಸಾಲು ಕಡಿಮೆ ಇದ್ದರೆ ನಮ್ಮ ಪುಣ್ಯ, ಇಲ್ಲದಿದ್ದರೆ ಮಾಮೂಲಿಯಾಗಿ ಕುರಿಗಳು ತುಂಬಿದಂತೆ ನಿಂತುಕೊಳ್ಳಲೂ
ಜಾಗವಿಲ್ಲದೆ ನಿರ್ವಾಹಕನ ಸಹಪ್ರಯಾಣಿಕರ ಜೊತೆ ವಾಗ್ವಾದ ಮಾಡಿಕೊಂಡು ಊರ ನಿರೀಕ್ಷಿಸಬೇಕಾಗಿತ್ತು . ಇನ್ನು ಪ್ರಯಾಣ ರದ್ದಾದರೆ ಹಣ ವಾಪಸ್ಸು ಪಡೆಯಲು ನಾವು
ಪೂರ್ವ ಜನ್ಮಮದ ಪುಣ್ಯ ಇರಬೇಕಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಹೌದು ನಾವು ಬೇರೆ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಕಾಲು ಭಾಗ ಪಯಣಿಸಿದ್ದೀವಿ, ಎಲ್ಲಾ ಸೇವೆಗಳು ಆನ್‌ಲೈನ್ ಆಗಿ ಇನ್ನಷ್ಟು ಪಾರದರ್ಶಕ ಹಾಗು ಭ್ರಷ್ಟರಹಿತವಾದರೆ ನಮ್ಮ ಭಾರತ ಸುಭದ್ರವಾಗುತ್ತದೆ.
ನಾನಿಲ್ಲಿ ಯಾವುದೇ ಸರ್ಕಾರದ ಪರವಾಗಿ ಮಾತಾಡುತ್ತಿಲ್ಲ ಯಾಕೆಂದರೆ ಈ ಬದಲಾವಣೆಗಳು ನಾವು ಕಂಡಿರುವುದು ತಂತ್ರಜ್ಞಾನದ ಅಳವಡಿಕೆಯ ಪ್ರಭಾವದಿಂದ, ಅದನ್ನು ಯಾವ ಸರ್ಕಾರವೇ ಮಾಡಿರಲಿ ಅವರಿಗೆ ಶ್ಲಾಘನೆ. ಈ ಯುಗದಲ್ಲಿ ಬದಲಾವಣೆಗಳನ್ನು ತರಲು ಸರ್ಕಾರಗಳು ತುದಿಗಾಲಲ್ಲಿ ನಿಲ್ಲಬೇಕು ಹಾಗೂ ಬದಲಾವಣೆಯ
ಲಾಭ ಪಡೆಯಲು ನಾವು ಸನ್ನದ್ಧರಾಗಬೇಕು, ಆಲ್ವ ಏನಂತೀರಿ ಗೆಳೆಯರೆ ?

Monday, September 14, 2015

ಗಣೇಶನ ಹಬ್ಬ




 ಗಣೇಶನ ಹಬ್ಬ ಎಂದರೆ  ಇಂದಿಗೂ ನೆನಪಾಗಿ ಕಾಡುವುದು ನಮ್ಮ ಪಾತಜ್ಜಿ ಮನೆ, ಮೂರೋ ನಾಲ್ಕೋ ಜನ ವಾಸ ಯೋಗ್ಯವಾದ ಮನೆಯಲ್ಲಿ, ಹಬ್ಬದ ಸಮಯ ಬರೋಬ್ಬರಿ ಹತ್ತರಿಂದ ಹದಿನೈದು ಜನ ವಾಸ.
ಅದು ಬೆಂಗಳೂರಿನ ಹಳೆಯ ಬಡಾವಣೆ ಯಶವಂತಪುರದ ಒಂದು  ಗಲ್ಲಿಯಲ್ಲಿನ ಪುಟ್ಟ ವಠಾರದಲ್ಲಿ ಒಂದು ಸಣ್ಣ ಮನೆ ( ನಿಜ ಹೇಳಬೇಕು ಎಂದರೆ ನಮಗೆ ಇಂದಿಗೂ ನಮ್ಮ ಬಾಲ್ಯದ ನೆನಪುಗಳ ರಾಶಿ ತುಂಬಿರುವ ಅರಮನೆ )

ಗಣೇಶನ ವ್ರತ ನಿಜ ಹೇಳಬೇಕು ಎಂದರೆ ಒಂದು ನೆಪ, ದೇವರಮೇಲಿನ ಭಕ್ತಿಗಿಂತ ಅಂದು ನಾವು ನಮ್ಮ ಏಲ್ಲಾ ನೆಂಟರನ್ನು ನೋಡುವ, ನಮ್ಮ ಸೋದರ(ದರಿ)ಗಳ ಜೊತೆ ಆಡುವ ಹರಟುವ ಸಂಭ್ರಮ. ಮೊದಲೇ ನಮ್ಮ ತಾತ  ಹೆಬ್ಬಾಲೆ ವೆಂಕಟಾಚಲಯ್ಯನವರು ಪುರೋಹಿತರು, ಅಜ್ಜಿ ಪಾರ್ವತಮ್ಮ ( ಪಾತಜ್ಜಿ ) ಪಾಕ ಪ್ರವೀಣೆ, ಯಾಕೆ ಈ ಪೀಟಿಕೆ ಎಂದರೆ ನಮ್ಮ ತಾತ ಪೂಜೆಮಾಡಿಸಿ ತಂದ ದವಸ, ಧಾನ್ಯ, ಹಣ್ಣು , ತರಕಾರಿ ಇದರ ಮೇಲೆ ಹಬ್ಬಕ್ಕೆ ಬಂದ ಮಕ್ಕಳು ಮೊಮ್ಮಕ್ಕಳಿಗೆ ಖುಷಿಪಡಿಸುವ ಸಲುವಾಗಿ ದಾರಾಳವಾದ ಕೈ, ನಮ್ಮ ಅಜ್ಜಿ ಮೊದಲೇ ಪಾಕ ಪ್ರವೀಣೆ ಇರುವ ಸಾಮಗ್ರಿಗಳಲ್ಲೇ, ಬೆಳಕೇ ಕಾಣದ ಚಿಕ್ಕ ಅಡುಗೆ ಮನೆಯಲ್ಲಿ ಇಪ್ಪತೈದರಿಂದ ಮೂವತ್ತು ಜನಗಳಿಗೆ ಹೊಟ್ಟೆತುಂಬಿ ಸುಸ್ತಾಗಿ ಮಲಗುವ ಹಾಗೆ ಅಡುಗೆ ಮಾಡುತ್ತಿದರು. ನಿಜ ಹೇಳ್ಬೇಕು ನಮಗೆ ಗಣೇಶನ ಹಬ್ಬವೆಂದರೆ ಊಟ, ಆಟ ಮತ್ತು ಹಾಡುಗಳು, ಅಂದು ನಾವೇ ಪಿಬಿಎಸ್ ಅಥವಾ ಎಸ್‌ಪಿಬಿ, ಗಣೇಶ ನೆಪ ಮಾತ್ರ.

ಹೌದು, ಹಬ್ಬ ಎಂದರೆ ಬರಿ ನೆಪ ಮಾತ್ರ, ಎಲ್ಲರೂ ಕೂಡಿ ಸಡಗರದಿಂದ ಓಡಾಡಿ, ಕಷ್ಟಾ ಸುಖಗಳನ್ನು ಮನೆಯ ಹಿರಿಯರೊಂದಿಗೆ ಹಂಚಿಕೊಂಡು, ಇರುವುದರಲ್ಲೇ ಆನಂದ ಪಡೆಯುವ ದಿನವೇ ಹಬ್ಬ ಅಲ್ವಾ. ಇಂದು ಬೇಕಾದ ತಿನಿಸುಗಳು ಅಂಗಡಿಯಲ್ಲಿ ಸಿಗುತ್ತದೆ, ಮೈ ತುಂಬಾ ಕಣ್ಣು ಕುಕ್ಕುವ ದಿರಿಸು ಆಭರಣಗಳು ಇರುತ್ತವೆ ಆದರೆ ಹಬ್ಬದ ದಿನ ಏನೂ ಇಲ್ಲದ್ದಾಗಿನ ಖುಷಿ ಇರುವುದಿಲ್ಲ, ಅದೇ ಅಡಿಗರ ಸಾಲು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ'

ಆ ಹಬ್ಬದ ಸಡಗರಗಳು ಬರಿಯ ನೆನಪು ಮಾತ್ರ, ಆದಿನಗಳು ಮತ್ತೆ ಮರಳಿದರೆ ? ಅಂದೇ ಗಣೇಶನ ಹಬ್ಬ! ಅಲ್ವಾ ?

Tuesday, September 23, 2014

ಹನಿಗವನ ನುಡಿವಮನ



ಎಲ್ಲರಿಗೂ ಮಕರ ಸಂಕ್ರಾಂತಿ
ದೇಶಪ್ರೇಮದಲ್ಲಿ " some ಕ್ರಾಂತಿ",
ಅಭಿವೃಧಿಯಲ್ಲಿ " sum ಕ್ರಾಂತಿ ",
ಆರೋಗ್ಯದಲ್ಲಿ " ಸಮಕ್ರಾಂತಿ " ಕರುಣಿಸಲಿ


ಗೆಳೆತನ

ಬಾಲ್ಯದ ಗೆಳೆತನವೇ ಗೆಳೆತನವು ಗೆಳೆಯ
ಹಮ್ಮು ಬಿಮ್ಮುಗಳ ಮೊರೆತವಿಲ್ಲದ ಸಮಯ


ಕುಡುಕ

ಕಾಡದೇ ಕುಡಿಯುವವ ಕಾನೂನಿಗೆ ಉತ್ತಮನು
ಬೇಡದೇ ಕುಡಿಯುವವ ಬಾರಿಗೆ ಬೇಕವನು
ಕಾಡೀಬೇಡಿ ಕುಡಿಯುವವ ಬೀಡಿಗೂ ಬೇಡುವನು
                ರಚನೆ : ಬಟ್ಟಿ ಇಳಿಸಿದ್ದಲ್ಲಾ ಸ್ವಂತ ಮಾಲು
ಯುಗಾದಿ

ಹೊಸದು ವರ್ಷ ಹೊಸತು ಹರ್ಷ
ನವಜಾತದ ನವಿರು ಸ್ಪರ್ಶ 


ಬರಲಿ ಎಲ್ಲರ ಬಾಳಲ್ಲಿ ಹೊಸದು ವಸಂತ
ಇರಲಿ ಎಲ್ಲರಲ್ಲು ಖುಷಿ ಅನಂತ 

ತರೆಗೆಲೆಗಳು ಉದುರಿ, ಮರಿ ಎಲೆಗಳು ಚಿಗುರಿ
ತಿರುಗಿತು  ಋತುಗಳ ಭೂಮಿ ಬಣ್ಣದ ಬುಗುರಿ
ಉದಯವಾಗಲಿ ಹೊಸ ವರ್ಷದ ಹೊಸದು ಗುರಿ
                           

ಶುಭಾಶಯ

ಕಿರು ನಗೆಯನ್ನು ಸೂಸಿ
ತೊದಲು ನುಡಿಯಲ್ಲಿ ನಲಿಸಿ
ಅಂಬೆಗಾಲಲ್ಲಿ ಮನೆಯಲ್ಲಾ ಗುಡಿಸಿ
ನಮ್ಮ ದುಖವನ್ನೆಲ್ಲ ಅಳಿಸಿದ
ನನ್ನ ಪುಟ್ಟಿಗೆ ಹತ್ತು ವರುಷ
ಇರಲಿ ನಿನ್ನ ಬಾಳಲ್ಲಿ ಹರುಷ ನೂರು ವರುಷ

     

ಕವಿತೆ

ಸರಿಸಿದ ರವಿ ಕವಿಗೆ ಕವಿದಾ ಕತ್ತಲು
ಹೊಳೆದಾಗ ಸಾಲು ಕವಿತೆಯಾಯಿತು ಬೆತ್ತಲು

 ಕವಿ


ಕನಸಿನ ಕದ ತೆರೆದು, ವಾಸ್ತವವ ಕ್ಷಣ ತೊರೆದು
ಕನಸಿಗನ ಕಣ್ಣಲ್ಲಿ ನೀ ಜಗವ ಸವಿಯೇ
ವಾಸ್ತವದಿ ನೀನೂ ಒಬ್ಬ ಸುಂದರ ಕವಿಯೇ
                        
                                           © ಮಹೇಶ್ ಕಶ್ಯಪ್