ಗಣೇಶನ ಹಬ್ಬ
ಎಂದರೆ ಇಂದಿಗೂ ನೆನಪಾಗಿ ಕಾಡುವುದು ನಮ್ಮ ಪಾತಜ್ಜಿ ಮನೆ, ಮೂರೋ ನಾಲ್ಕೋ ಜನ ವಾಸ ಯೋಗ್ಯವಾದ ಮನೆಯಲ್ಲಿ, ಹಬ್ಬದ ಸಮಯ ಬರೋಬ್ಬರಿ ಹತ್ತರಿಂದ ಹದಿನೈದು ಜನ ವಾಸ.
ಅದು
ಬೆಂಗಳೂರಿನ ಹಳೆಯ ಬಡಾವಣೆ ಯಶವಂತಪುರದ ಒಂದು
ಗಲ್ಲಿಯಲ್ಲಿನ ಪುಟ್ಟ ವಠಾರದಲ್ಲಿ ಒಂದು ಸಣ್ಣ ಮನೆ ( ನಿಜ ಹೇಳಬೇಕು ಎಂದರೆ ನಮಗೆ
ಇಂದಿಗೂ ನಮ್ಮ ಬಾಲ್ಯದ ನೆನಪುಗಳ ರಾಶಿ ತುಂಬಿರುವ ಅರಮನೆ )
ಗಣೇಶನ ವ್ರತ
ನಿಜ ಹೇಳಬೇಕು ಎಂದರೆ ಒಂದು ನೆಪ, ದೇವರಮೇಲಿನ ಭಕ್ತಿಗಿಂತ ಅಂದು ನಾವು ನಮ್ಮ ಏಲ್ಲಾ ನೆಂಟರನ್ನು ನೋಡುವ, ನಮ್ಮ ಸೋದರ(ದರಿ)ಗಳ ಜೊತೆ ಆಡುವ ಹರಟುವ ಸಂಭ್ರಮ. ಮೊದಲೇ ನಮ್ಮ ತಾತ ಹೆಬ್ಬಾಲೆ ವೆಂಕಟಾಚಲಯ್ಯನವರು ಪುರೋಹಿತರು, ಅಜ್ಜಿ ಪಾರ್ವತಮ್ಮ ( ಪಾತಜ್ಜಿ ) ಪಾಕ
ಪ್ರವೀಣೆ, ಯಾಕೆ ಈ ಪೀಟಿಕೆ ಎಂದರೆ ನಮ್ಮ ತಾತ
ಪೂಜೆಮಾಡಿಸಿ ತಂದ ದವಸ, ಧಾನ್ಯ, ಹಣ್ಣು , ತರಕಾರಿ ಇದರ ಮೇಲೆ ಹಬ್ಬಕ್ಕೆ ಬಂದ
ಮಕ್ಕಳು ಮೊಮ್ಮಕ್ಕಳಿಗೆ ಖುಷಿಪಡಿಸುವ ಸಲುವಾಗಿ ದಾರಾಳವಾದ ಕೈ, ನಮ್ಮ ಅಜ್ಜಿ ಮೊದಲೇ ಪಾಕ ಪ್ರವೀಣೆ ಇರುವ
ಸಾಮಗ್ರಿಗಳಲ್ಲೇ, ಬೆಳಕೇ ಕಾಣದ ಚಿಕ್ಕ ಅಡುಗೆ ಮನೆಯಲ್ಲಿ ಇಪ್ಪತೈದರಿಂದ ಮೂವತ್ತು
ಜನಗಳಿಗೆ ಹೊಟ್ಟೆತುಂಬಿ ಸುಸ್ತಾಗಿ ಮಲಗುವ ಹಾಗೆ ಅಡುಗೆ ಮಾಡುತ್ತಿದರು. ನಿಜ ಹೇಳ್ಬೇಕು ನಮಗೆ
ಗಣೇಶನ ಹಬ್ಬವೆಂದರೆ ಊಟ, ಆಟ ಮತ್ತು ಹಾಡುಗಳು, ಅಂದು ನಾವೇ ಪಿಬಿಎಸ್ ಅಥವಾ ಎಸ್‌ಪಿಬಿ, ಗಣೇಶ ನೆಪ ಮಾತ್ರ.
ಹೌದು, ಹಬ್ಬ ಎಂದರೆ ಬರಿ ನೆಪ ಮಾತ್ರ, ಎಲ್ಲರೂ ಕೂಡಿ ಸಡಗರದಿಂದ ಓಡಾಡಿ, ಕಷ್ಟಾ ಸುಖಗಳನ್ನು ಮನೆಯ ಹಿರಿಯರೊಂದಿಗೆ
ಹಂಚಿಕೊಂಡು, ಇರುವುದರಲ್ಲೇ ಆನಂದ ಪಡೆಯುವ ದಿನವೇ ಹಬ್ಬ ಅಲ್ವಾ. ಇಂದು ಬೇಕಾದ ತಿನಿಸುಗಳು ಅಂಗಡಿಯಲ್ಲಿ
ಸಿಗುತ್ತದೆ, ಮೈ ತುಂಬಾ ಕಣ್ಣು ಕುಕ್ಕುವ ದಿರಿಸು ಆಭರಣಗಳು ಇರುತ್ತವೆ ಆದರೆ
ಹಬ್ಬದ ದಿನ ಏನೂ ಇಲ್ಲದ್ದಾಗಿನ ಖುಷಿ ಇರುವುದಿಲ್ಲ, ಅದೇ ಅಡಿಗರ ಸಾಲು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ
ತುಡಿವುದೇ ಜೀವನ'
ಆ ಹಬ್ಬದ ಸಡಗರಗಳು ಬರಿಯ
ನೆನಪು ಮಾತ್ರ, ಆದಿನಗಳು ಮತ್ತೆ ಮರಳಿದರೆ ? ಅಂದೇ ಗಣೇಶನ ಹಬ್ಬ! ಅಲ್ವಾ ?
No comments:
Post a Comment