ನಾನು ಶಾಲೆಯಲ್ಲಿ ಓದುತಿದ್ದ ಸಮಯ, ಎಲ್ಲಾ ಮಕ್ಕಳಂತೆ ಊಟದ ಡಬ್ಬಿ ಯನ್ನು ಪೂರ್ತಿ ಖಾಲಿ ಮಾಡದೆ ಮನೆಗೆ ಹಿಂದುರುಗಿ ಬರುವ ಚಾಳಿ ಬೆಳೆಸಿಕೊಂಡಿದ್ದೆ. ದಿನವೂ ಅಮ್ಮ ನಾನು ಶಾಲೆಯಿಂದ ಬಂದಮೇಲೆ ನನ್ನ ಡಬ್ಬಿ ಪರೀಕ್ಷಿಸಿ 'ಊಟ ಏಕೆ ಬಿಟ್ಟೆ ಅಂತ' ಕೇಳಿದರೆ ನಾನು ಬೇಕಾಬಿಟ್ಟಿಯಾಗಿ 'ನನಗೆ ಆ ತರಕಾರಿ ಸೇರೊಲ್ಲಾ ಈ ತರಕಾರಿ ರುಚಿಸೋಲ್ಲಾ ಅಂತ ರಾಗ ಎಳೆಯುತ್ತಿದ್ದೆ ', ಇದು ಹೀಗೆ ತುಂಬಾ ದಿವಸ ಕಳೆಯಿತು. ಒಂದು ದಿವಸ ಎಂದಿನಂತೆ ನಾನು ಡಬ್ಬಿ ಖಾಲಿ ಮಾಡದೆ ಬಂದಾಗ ಅಮ್ಮ ಏನೂ ಬಯ್ಯಲಿಲ್ಲ ಆದರೆ ನನ್ನ ಜೊತೆ ಮಾತನಾಡಲೂ ಇಲ್ಲ , ಅಮ್ಮ ಕೋಪಗೊಂಡಿದ್ದು ಬಹಳ ಕಡಿಮೆ ಆದರೆ ಮುನಿಸಿಕೊಂಡರೆ ಅವಳನ್ನು ಸಮಾಧಾನಗೊಳಿಸುವುದು ಕಷ್ಟದ ಕೆಲಸ, ನನಗೆ ಆವಾಗ ಅಪ್ಪನ ಜೊತೆಗಿಂತ ಅಮ್ಮನ ಒಡನಾಟವೇ ಹೆಚ್ಚು ಆದರೆ ಅಮ್ಮ ಉಮ್ ಅಂತಲೇ ಇದ್ದಳು , ನಾನು ನನ್ನ ಸರ್ವ ಪ್ರಯತ್ನವೂ ಮಾಡಿದರು ಅಮ್ಮ ಕರಗಲೇ ಇಲ್ಲ ನನಗೂ ದಿಕ್ಕು ತೋಚಲೇ ಇಲ್ಲ , ಕೊನೆಗೆ ಅಳುತ್ತ 'ಏಕೆ ನನ್ನ ಮೇಲೆ ಕೋಪ ಅಮ್ಮ ?' ಅಂದಾಗ ಅಮ್ಮ ಏನೋ ಹೇಳಬೇಕೆಂದು ಪ್ರಯತ್ನಿಸಿ ಆಗದೆ ಗದ್ಗದಿತಳಾದಳು, ಅಮ್ಮನನ್ನು ನಾನು ಎಂದಿಗೂ ಹಾಗೆ ನೋಡಿರಲಿಲ್ಲ ಅಮ್ಮನೇ ಅಳುವಾಗ ಇನ್ನೂ ಗಾಬರಿಯಾಗಿ ಯಾಕಮ್ಮ ಅಂತ ಕೇಳಲು ಅಮ್ಮ ಅಂದಳು ' ನಿಮ್ಮ ತಾತ ಜ್ಞಾಪಕಕ್ಕೆ ಬಂದರು ' ಅಂತ ಹೇಳಿ ಮೌನಿಯಾದಳು . ನಾನು ಸಾವರಿಸಿಕೊಂಡು ಅಮ್ಮ ಯಾಕಮ್ಮ ತಾತ ನೆನಪಿಗೆ ಬಂದರು ಯಾಕೆ ನೀನು ಅಳುತ್ತಿರುವೆ ಅಂದಾಗ ಅಮ್ಮ ತನ್ನ ಬಾಲ್ಯದ ಒಂದು ಪ್ರಸಂಗ ಹೇಳಿದಳು .
ಅಮ್ಮ ಬಡತನದ ಕುಟುಂಬದಿಂದ ಬಂದವಳು ( ಅಪ್ಪ ಹೊರತಲ್ಲ) ನಮ್ಮ ತಾತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆಹಾರ ಪಥ್ಯೆ ನೋಡಿಕೊಳ್ಳುವ ಸಾಮಾನ್ಯ ದರ್ಜೆ ಗುಮಾಸ್ತ , ಬಡತನವಿದ್ದರೂ ಹೃದಯ ಶ್ರೀಮಂತಿಕೆಯ ವ್ಯಕ್ತಿ , ಆಜಾನು ಬಾಹು, ರಕ್ತ ಚಿಮ್ಮುವಂತ ಮೈಬಣ್ಣದ ವ್ಯಕ್ತಿ, ತನ್ನ ಸಂಗಡಿಗರಿಗೆ ಹಾಗೂ ನೆರೆ ಹೊರೆಯವರಿಗೆ ಬಹಳ ಆದರ್ಶ ತುಂಬಿದವ್ಯಕ್ತಿ , ತನ್ನ ಮಕ್ಕಳಿಗಂತೂ ಬಹಳ ಆಪ್ಯಾಯಮಾನವಾದ ಅಪ್ಪ . ಎಷ್ಟೇ ದುಡಿದರೂ ಮೂರು ಹೊತ್ತಿನ ಊಟಕ್ಕೆ ಸಾಲುತ್ತಿರಲಿಲ್ಲ , ಮಕ್ಕಳು ಅಪ್ಪನ ಸ್ಥಿತಿಯನ್ನು ಕಂಡು ಅವರಿಗೆ ಮತ್ತೂ ಹೊರೆಯಾಗದಂತೆ ಅಪ್ಪನಿಗೆ ತಿಳಿಯದ ಹಾಗೆ ಕಾಗದ ಚೀಲ ಮಾಡಿ , ಅಗರಬತ್ತಿ ಹೊಸೆದು ಹಣ ಸಂಪಾದನೆ ಮಾಡಿ ಅಪ್ಪನಿಗೆ ಹೊರೆಯಾಗದಂತೆ ಮನೆಗೆ ಸಾಬೂನು, ಟೂಥ್ ಪೇಸ್ಟ್ , ಪೆನ್ಸಿಲ್ಲು , ಪೆನ್ನು ಹೀಗೆ ಆದಷ್ಟು ಮಟ್ಟಿಗೆ ಅಪ್ಪನ ಹೊರೆಯನ್ನು ತಗ್ಗಿಸಲು ಅಪ್ಪನಿಗೆ ಸರ್ವ ಪ್ರಯತ್ನ ಮಾಡುತ್ತಿದ್ದರು, ಅಪ್ಪನ ಪ್ರೀತಿ ಮಕ್ಕಳಿಗೆ ತಮ್ಮ ಬಡತನ ಮರೆಸುತ್ತಿತ್ತು . ಅಪ್ಪನಿಗೆ ಮಕ್ಕಳ ಬಗ್ಗೆ ಎಲ್ಲಿಲದ ಹೆಮ್ಮೆ , ಯಾಕೆಂದರೆ ಅಪ್ಪನಲ್ಲಿ ಎಂದಿಗೂ ಏನನ್ನೂ ಸಹ ಬೇಕು ಅಂತ ಹಠ ಮಾಡದ ಮಕ್ಕಳು , ಆದರೆ ಅಪ್ಪನಿಗೆ ತಾನು ಮಕ್ಕಳಿಗೆ ಮೂರು ಹೊತ್ತಿನ ಊಟ ಹಾಕಲು ಸಾದ್ಯವಾಗುತ್ತಿಲ್ಲವಲ್ಲ ಎಂಬ ಕೊರಗು, ಹೀಗೆ ಒಂದು ದಿನ ತನ್ನ ಕೆಲಸದ ವೇಳೆ ನಮ್ಮ ತಾತ ಸಹುದ್ಯೋಗಿ ಗಳೊಂದಿಗೆ ಮಕ್ಕಳಿಗೆ ಸರಿಯಾಗಿ ಊಟಹಾಕಲು ಆಗುತ್ತಿಲ್ಲವಲ್ಲ ಎಂಬ ಕೊರಗು ತೋಡಿಕೊಂಡಾಗ ಸಹುದ್ಯೋಗಿ ಒಬ್ಬರು ತಾತನಿಗೆ ಹೇಳಿದರಂತೆ ' ಏಕೆ ಬೇಜಾರು ಪಡುವೆ, ನಮ್ಮ ಆಸ್ಪತ್ರೆ ಅಡುಗೆ ಮನೆಯಲ್ಲಿ ದಿನವೂ ರೋಗಿಗಳಿಗೆ ಆಹಾರ ನೀಡಿದ ಮೇಲೆ ಮಿಕ್ಕುವ ಎಷ್ಟೋ ಅನ್ನವನ್ನು ಎಸೆಯುತ್ತಾರೆ , ಹಾಗಿದ್ದಾಗ ಯಾಕೆ ನೀನು ಮನೆಗೆ ಸ್ವಲ್ಪ ಅನ್ನವನ್ನು ತೆಗೆದು ಕೊಂಡು ಹೋಗಬಾರದು? ಆಗ ಮಕ್ಕಳಿಗೆ ಊಟ ಸಿಕ್ಕಿದಂತಾಗುತ್ತದೆ' ಎಂದಾಗ ತಾತನಿಗೂ ಅದು ಸರಿ ಅನ್ನಿಸಿ ಅಂದು ಮಧ್ಯಾನ್ಹ ತಮ್ಮ ಪಾಳಿ ಮುಗಿಸಿಕೊಂಡು ಬರುವ ಮುನ್ನ ಮೇಲಧಿಕಾರಿಗಳಿಗೆ ತಿಳಿಯದಂತೆ ಒಂದು ಟವಲ್ಲಿಗೆ ಬಿಸಿ ಅನ್ನವನ್ನು ಹರಡಿಕೊಂಡು ಅದನ್ನು ಬೆನ್ನಿಗೆ ಕಟ್ಟಿಕೊಂಡು ಅದರ ಮೇಲೆ ತಮ್ಮ ಜುಬ್ಬವನ್ನು ಹಾಕಿ ಕೊಂಡು ಮನೆಯ ಕಡೆ ನಡೆದು ಹೊರಟರಂತೆ , ಆಗತಾನೆ ಬಸಿದಿದ್ದ ಅನ್ನದ ಬಿಸಿ ಬೆನ್ನಿನ ಚರ್ಮ ಸುಡಲು ಪ್ರಾರಂಭಿಸಿದರೂ ಅದರ ಚಿಂತೆ ಮಾಡದೆ ಮನೆ ಸೇರಿದರಂತೆ . ಅಪ್ಪನ ಬರುವಿಕೆ ಕಾದಿದ್ದ ಮಕ್ಕಳು ಅಪ್ಪ ಗಡಿಬಿಡಿ ಯಲ್ಲಿ ಬಂದು ಬೆನ್ನಿಗೆ ಸುತ್ತಿದ್ದ ಅನ್ನದ ಟವಲನ್ನು ಬಿಚ್ಚಿಟ್ಟರಂತೆ , ಮಕ್ಕಳು ಅಪ್ಪನ್ನ ಬೆನ್ನು ನೋಡಿದರೆ ಕೆಂಪಗೆ ಬೆನ್ನ ಸುತ್ತಲೂ ಬೊಬ್ಬೆ ಇದ್ದದು ಕಂಡು ಚೀರಿದರಂತೆ ' ಅಣ್ಣಾ ! ಏನಿದು ಯಾಕೆ ಹೀಗೆ ಮಾಡಿದಿರಿ ಅಂದರೆ ?' ತಾತ ಹೇಳಿದರಂತೆ ' ಅಪ್ಪನಾಗಿ ಮಕ್ಕಳನ್ನು ಹಸಿವಿನಿಂದ ದೂರಮಾಡಲು ಹೀಗೆ ಮಾಡಿದೆ , ಏನು ಮಾಡಲಿ ದೇವರಂತ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಹಾಕಲು ಆಗುತ್ತಿಲ್ಲವಲ್ಲ ಎಂದು ಹೀಗೆ ಮಾಡಿದೆ ಅಂದರಂತೆ ' , ಮಕ್ಕಳು ಅಪ್ಪನ ವಾತ್ಸಲ್ಯ ನೆನೆದು ಇಂದಿಗೂ ಸಹ ಅನ್ನವನ್ನೋ ಅಥವ ಆಹಾರವನ್ನೋ ಚೆಲ್ಲುವುದು ಕಂಡಾಗಲೆಲ್ಲ ಅಪ್ಪನ ಆ ದಿನದ ನೋವು ಕಣ್ಣಿಗೆ ಬರುತ್ತದೆ ಅನುತ್ತಾರೆ ಹಾಗು ಅಂದಿನಿಂದ ಅನ್ನವನ್ನು ಒಂದಿಷ್ಟು ಚೆಲ್ಲಲು ಮನಸ್ಸು ಬರುವುದಿಲ್ಲ ಎಂದು ಅಮ್ಮ ನೆನದು ಮತ್ತೆ ಗದ್ಗದಿತರಾದರು .
ಅಮ್ಮ ಹೇಳಿದ ಪ್ರಸಂಗ ನನಗೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ ಹಾಗು ನಾನು ಕೂಡ ಸಾಧ್ಯವಾದಷ್ಟು ಒಂಚೂರು ಚೆಲ್ಲದಂತೆ ಊಟ ಮಾಡಲು ಪ್ರಯತ್ನ ಪಡುತ್ತೇನೆ ಹಾಗು ನನ್ನ ಮಗಳಿಗೂ ಆಹಾರ ಚೆಲ್ಲದಂತೆ ಆದಷ್ಟು ನಿಗಾ ವಹಿಸಲು ಪ್ರೋತ್ಸಾಹಿಸುತ್ತೇನೆ .
ಕಷ್ಟ ಪಟ್ಟು ಸಂಪಾದಿಸಿದಿದ ಆಹಾರವನ್ನು ಕಸಕ್ಕೆ ಚೆಲ್ಲುವುದು ಎಷ್ಟು ನ್ಯಾಯ ಹೇಳಿ ನಾವು ಚೆಲ್ಲುವ ಆಹಾರ ಎಷ್ಟೋ ಹಸಿದವರ ಪಾಲಿನಿಂದ ಕಸಿದಂತೆ, ಇದೂ ಕೂಡ ಪಾಪಕ್ಕೆ ಸಮ. ನಮಗೆ ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಸಾಧ್ಯವಾದಷ್ಟು ಚೆಲ್ಲದಂತೆ ತಿನ್ನೋಣ ಹಾಗು ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗಿ ಈ ನಮ್ಮ ಗುಣವನ್ನು ಅನುಕರಿಸುವಂತೆ ಮಾಡೋಣ .

ಎಲ್ಲಾ ವಿಚಾರದಲ್ಲೂ ಆದರ್ಶ ವ್ಯಕ್ತಿತ್ವ ಅವರದು
ReplyDelete